ಶ್ರೀ ಮಾರುತಿರಾಯ ನಮಃ
ıı ಓಂ ಹನುಮಾನ್ ಶ್ರೀ ಪುದೋ ವಾಯುಪುತ್ರೋ ರುದ್ರೋಸಫೋಜರಃ ıı
ಅಮೃತ್ಯುರ್ವೀರ ವೀರಶ್ಚ ಗ್ರಾಮ ವಾಸೋ ಜನಾಶ್ರಯಃ
ಸುಕ್ಷೇತ್ರದ ಕಿರುಪರಿಚಯ
ನಿಡಘಟ್ಟ ಸುಕ್ಷೇತ್ರದ ಬಗ್ಗೆ ಈ ಪುರದ ಹಿರಿಯ ಜ್ಞಾನವೃದ್ಧರಾದ ಗೌಡಿಕೆ ಮನೆತನದ ಬಿಳೇಮಲ್ಲಯ್ಯನವರ ವಂಶಸ್ಥರಾದ ಶ್ರೀ. ಬಿಳೇಮಲ್ಲೇಗೌಡರು ಹಾಗೂ ಪಟೇಲರ ಮನೆತನದ ಪ್ರಮುಖ ಗೌಡರಾದ ಶ್ರೀ. ಪುಟ್ಟೇಗೌಡರು ಹಾಗೂ ಎತ್ತಿನ ಮನೆ ವಂಶಸ್ಥರಾದ ಶ್ರೀ. ಈಶ್ವರಪ್ಪನವರು, ಇವರುಗಳಿಂದ ಸಂಗ್ರಹಿಸಿದ ಕೆಲವು ಐತಿಹ್ಯಗಳೊಂದಿಗೆ ಈ ಸುಕ್ಷೇತ್ರದ ಕಿರುಪರಿಚಯವನ್ನು ಸದ್ಬಕ್ತರಾದ ತಮ್ಮ ಮುಂದಿಡುತ್ತಿದ್ದೇನೆ.
ಸುಮಾರು 550 ರುಣದ 600 ವರ್ಷಗಳ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ನಿಡಘಟ್ಟವೆಂಬ ಸುಕ್ಷೇತ್ರವು ಗೌಡಿಕೆ ಪತ್ತಿನ ಒಡೆಯನ ಆಳ್ವಿಕೆಯಲ್ಲಿ ಕೋಟೆ ಕೊತ್ತಲಗಳಿಂದ ಹಿರಿದಾದ ಹೆಬ್ಬಾಗಿಲಿನಿಂದ ಕೆರೆಪಟ್ಟೆ ಮತ್ತು ಹಳ್ಳಿಕೆರೆ ಎಂಬ ಕೆರೆ ಕಟ್ಟೆಗಳಿಂದ ರಾರಾಜಿಸಿ ತುಂಬಾ ಶಿಸ್ತಿನ ಗೌಡಿಕೆಯ ಆಡಳಿತ ನಡೆಸಿ, ಸೌಜನ್ಯ, ತಾಳ್ಮೆ ಸಂಯಮ, ಗೌರವಾದಿ ಸಂಪೂಜ್ಯ ಭಾವನೆಗಳ ಜನ ಸಮುದಾಯ ನೆಲಸಿ ಸುಖ, ಶಾಂತಿ ನೆಮ್ಮದಿಯ ಪುರವಾಗಿ ಪಸರಿಸಿತ್ತು.
ಗೌಡಿಕೆ ಪತ್ತಿನ ಒಡೆಯನ ಕಾಲದಲ್ಲೇ ಈ ಊರಿನ ಹೊರಭಾಗದ ದಕ್ಷಿಣ ಬಾಗಿಲಿನ ಒಂದು ಮಣ್ಣಿನ ಮಾದರಿಯ ಚಿಕ್ಕಗುಡಿಯನ್ನು ಕಟ್ಟಿ, ಇದರಲ್ಲಿ ಶ್ರೀ. ಮಾರುತಿರಾಯರ ಸುಂದರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಅತ್ಯಮತ ಶ್ರದ್ಧಾ ಭಯ ಭಕ್ತಿಯಿಂದ ಪ್ರಾರ್ಥಿಸಿ ಪೂಜಿಸಿ, ಅನನ್ಯ ಭಕ್ತಿಯಿಂದ ಸೇವೆಗಯ್ಯುತ್ತಾ ಶ್ರೀ. ಮಾರುತಿರಾಯರ ಸಮೃದ್ಧ ಸಿರಿ ಸೌಭಾಗ್ಯಗಳಿಂದ ಕಂಗೊಳಿಸುತ್ತಿದ್ದ ಪುರವೇ ಈ ನಿಡಭಟ್ಟವೆಂಬ ಶ್ರೀ. ಮಾರುತಿರಾಯರ ಸುಕ್ಷೇತ್ರ. ಈ ಕಾಳಣ್ಣ ಗೌಡನ ಆಳ್ವಿಕೆ ಮುಗಿಯುತ್ತಾ ಬಂದಂತೆ ಈ ಮಾರುತಿರಾಯರು ನಂಬಿದ ಭಕ್ತರನ್ನು ಬಿಡದಂತೆ ಕಾಪಾಡುತ್ತಾ ಕಾಲವು ಉರುಳಿತು. ಜಿಲ್ಲಾ ಅರಸೀಕೆರೆ ತಾಲ್ಲೂಕಿನ ಬಾಣಾವರ ಹೋಬಳಿಯ ಅರಕೆರೆಯ ಒಂದು ಬ್ರಾಹ್ಮಣ ಈ ಪುರದ ಮಾರ್ಗವಾಗಿ ಅರಕೆರೆಯಿಂದ ಮಂಗಳೂರಿಗೆ ಕುದುರೆಗಳ ಮೇಲೆ ಸರಕುಗಳನ್ನೇರಿಕೊಂಡು ವ್ಯಾಪರಕ್ಕಾಗಿ ಹೋಗಿ ಬರುವ ಪರಿಪಾಠ ಇಟ್ಟುಕೊಂಡಿದ್ದರು. ಮಾರ್ಗಮಧ್ಯದಲ್ಲಿ ಇಲ್ಲಿ ಪೆಂಟಿಕಟ್ಟಿ ತಂಗಿದ್ದು, ಶ್ರೀ. ರಾಯರಿಗೆ ಪ್ರಾರ್ಥನೆ ಮಾಡಿ ಭಕ್ತಿಯಿಂದ ಪೂಜೆ ಸಲ್ಲಿಸಿ ಹೋಗಿ ಬರುತ್ತಿದ್ದರು. ಶ್ರೀ. ರಾಯರನ್ನು ಶ್ರದ್ಧಾಭಕ್ತಿಯಿಂದ ನಂಬಿಕೊಮಡು ನಡೆಯುತ್ತಿದ್ದರು.