ಶ್ರೀ ಮಾರುತಿರಾಯ ನಮಃ
ıı ಓಂ ಹನುಮಾನ್ ಶ್ರೀ ಪುದೋ ವಾಯುಪುತ್ರೋ ರುದ್ರೋಸಫೋಜರಃ ıı
ನಿಡಘಟ್ಟ ಸುಕ್ಷೇತ್ರದ ಬಗ್ಗೆ ಈ ಪುರದ ಹಿರಿಯ ಜ್ಞಾನವೃದ್ಧರಾದ ಗೌಡಿಕೆ ಮನೆತನದ ಬಿಳೇಮಲ್ಲಯ್ಯನವರ ವಂಶಸ್ಥರಾದ ಶ್ರೀ. ಬಿಳೇಮಲ್ಲೇಗೌಡರು ಹಾಗೂ ಪಟೇಲರ ಮನೆತನದ ಪ್ರಮುಖ ಗೌಡರಾದ ಶ್ರೀ. ಪುಟ್ಟೇಗೌಡರು ಹಾಗೂ ಎತ್ತಿನ ಮನೆ ವಂಶಸ್ಥರಾದ ಶ್ರೀ. ಈಶ್ವರಪ್ಪನವರು, ಇವರುಗಳಿಂದ ಸಂಗ್ರಹಿಸಿದ ಕೆಲವು ಐತಿಹ್ಯಗಳೊಂದಿಗೆ ಈ ಸುಕ್ಷೇತ್ರದ ಕಿರುಪರಿಚಯವನ್ನು ಸದ್ಬಕ್ತರಾದ ತಮ್ಮ ಮುಂದಿಡುತ್ತಿದ್ದೇನೆ.
ಸುಮಾರು 550 ರುಣದ 600 ವರ್ಷಗಳ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ನಿಡಘಟ್ಟವೆಂಬ ಸುಕ್ಷೇತ್ರವು ಗೌಡಿಕೆ ಪತ್ತಿನ ಒಡೆಯನ ಆಳ್ವಿಕೆಯಲ್ಲಿ ಕೋಟೆ ಕೊತ್ತಲಗಳಿಂದ ಹಿರಿದಾದ ಹೆಬ್ಬಾಗಿಲಿನಿಂದ ಕೆರೆಪಟ್ಟೆ ಮತ್ತು ಹಳ್ಳಿಕೆರೆ ಎಂಬ ಕೆರೆ ಕಟ್ಟೆಗಳಿಂದ ರಾರಾಜಿಸಿ ತುಂಬಾ ಶಿಸ್ತಿನ ಗೌಡಿಕೆಯ ಆಡಳಿತ ನಡೆಸಿ, ಸೌಜನ್ಯ, ತಾಳ್ಮೆ ಸಂಯಮ, ಗೌರವಾದಿ ಸಂಪೂಜ್ಯ ಭಾವನೆಗಳ ಜನ ಸಮುದಾಯ ನೆಲಸಿ ಸುಖ, ಶಾಂತಿ ನೆಮ್ಮದಿಯ ಪುರವಾಗಿ ಪಸರಿಸಿತ್ತು.
ಗೌಡಿಕೆ ಪತ್ತಿನ ಒಡೆಯನ ಕಾಲದಲ್ಲೇ ಈ ಊರಿನ ಹೊರಭಾಗದ ದಕ್ಷಿಣ ಬಾಗಿಲಿನ ಒಂದು ಮಣ್ಣಿನ ಮಾದರಿಯ ಚಿಕ್ಕಗುಡಿಯನ್ನು ಕಟ್ಟಿ, ಇದರಲ್ಲಿ ಶ್ರೀ. ಮಾರುತಿರಾಯರ ಸುಂದರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಅತ್ಯಮತ ಶ್ರದ್ಧಾ ಭಯ ಭಕ್ತಿಯಿಂದ ಪ್ರಾರ್ಥಿಸಿ ಪೂಜಿಸಿ, ಅನನ್ಯ ಭಕ್ತಿಯಿಂದ ಸೇವೆಗಯ್ಯುತ್ತಾ ಶ್ರೀ. ಮಾರುತಿರಾಯರ ಸಮೃದ್ಧ ಸಿರಿ ಸೌಭಾಗ್ಯಗಳಿಂದ ಕಂಗೊಳಿಸುತ್ತಿದ್ದ ಪುರವೇ ಈ ನಿಡಭಟ್ಟವೆಂಬ ಶ್ರೀ. ಮಾರುತಿರಾಯರ ಸುಕ್ಷೇತ್ರ. ಈ ಕಾಳಣ್ಣ ಗೌಡನ ಆಳ್ವಿಕೆ ಮುಗಿಯುತ್ತಾ ಬಂದಂತೆ ಈ ಮಾರುತಿರಾಯರು ನಂಬಿದ ಭಕ್ತರನ್ನು ಬಿಡದಂತೆ ಕಾಪಾಡುತ್ತಾ ಕಾಲವು ಉರುಳಿತು. ಜಿಲ್ಲಾ ಅರಸೀಕೆರೆ ತಾಲ್ಲೂಕಿನ ಬಾಣಾವರ ಹೋಬಳಿಯ ಅರಕೆರೆಯ ಒಂದು ಬ್ರಾಹ್ಮಣ ಈ ಪುರದ ಮಾರ್ಗವಾಗಿ ಅರಕೆರೆಯಿಂದ ಮಂಗಳೂರಿಗೆ ಕುದುರೆಗಳ ಮೇಲೆ ಸರಕುಗಳನ್ನೇರಿಕೊಂಡು ವ್ಯಾಪರಕ್ಕಾಗಿ ಹೋಗಿ ಬರುವ ಪರಿಪಾಠ ಇಟ್ಟುಕೊಂಡಿದ್ದರು. ಮಾರ್ಗಮಧ್ಯದಲ್ಲಿ ಇಲ್ಲಿ ಪೆಂಟಿಕಟ್ಟಿ ತಂಗಿದ್ದು, ಶ್ರೀ. ರಾಯರಿಗೆ ಪ್ರಾರ್ಥನೆ ಮಾಡಿ ಭಕ್ತಿಯಿಂದ ಪೂಜೆ ಸಲ್ಲಿಸಿ ಹೋಗಿ ಬರುತ್ತಿದ್ದರು. ಶ್ರೀ. ರಾಯರನ್ನು ಶ್ರದ್ಧಾಭಕ್ತಿಯಿಂದ ನಂಬಿಕೊಮಡು ನಡೆಯುತ್ತಿದ್ದರು.
ಮಕ್ಕಳಿಲ್ಲದ ಈ ಶ್ರೀಮಂತ ವ್ಯಾಪಾರಸ್ಥ ಬ್ರಾಹ್ಮಣ ಮನೆತನಕ್ಕೆ ಶ್ರೀ. ಮಾರುತಿರಾಯರು ಮಕ್ಕಳ ಭಾಗ್ಯ ಕರುಣಿಸಿದರೆ ಶ್ರೀ. ರಾಯರಿಗೆ ಒಂದು ದೊಡ್ಡ ದೇವಾಲಯವನ್ನು ಕಟ್ಟಿಸುತ್ತೇವೆಂದು ಹರಕೆ ಹೊತ್ತರು. ಶ್ರೀ. ಮಾರುತಿರಾಯರು ಈ ಶ್ರೀಮಂತ ಸದ್ಬಕ್ತ ಕುಟುಂಬದ ಮೇಲೆ ಕೃಪೆ ತೊರಿದುದರ ಫಲವಾಗಿ ಈ ಮನೆತನಕ್ಕೆ ಸಂತಾನ ಭಾಗ್ಯ ಪ್ರಾಪ್ತಿಯಾಯಿತು. ಸತ್ಫಲವಾಗಿ ಈ ಸದ್ಬಕ್ತ ಮನೆತನ ನುಡಿದಂತೆ ನಡೆದುಕೊಂಡು ಶ್ರೀ. ಮಾರುತಿರಾಯರಿಗೆ ಒಂದು ಸುಂದರವಾದ ದೊಡ್ಡ ದೇವಾಲಯವನ್ನು ಕಟ್ಟಿಸಿ ಅದ್ದೂರಿಯಾಗಿ ಶ್ರೀ. ರಾಯರ ಸೇವೆಯನ್ನು ಮಾಡಿ ಪುರಭಕ್ತರಿಗೆ ಸಮರ್ಪಿಸಿ ಶ್ರೀ. ಮಾರುತಿರಾಯರ ಕೃಪಾಕಟಾಕ್ಷಕ್ಕೆ ಪಾತ್ರರಾದರು. ಮುಂದಿನ ರಾಯರು ಸೇವಾಭಿವೃದ್ಧಿಗಾಗಿ ಪುರಭಕ್ತರೆಲ್ಲಾ ಒಂದುಗೂಡಿ ಪ್ರಮುಖರೆಲ್ಲ ಸೇರಿ ಶ್ರೀ.ರಾಯರ ದೇವಾಲಯದ ಅಭಿವೃದ್ಧಿಗೆ, ನಿತ್ಯಪೂಜೆಗೆ, ವರ್ಷವರ್ಷವೂ ನಡೆಯುವ ಶ್ರೀ. ಸ್ವಾಮಿ ರಥೋತ್ಸವವು ಸಾಂಗೋಪಸಾಂಗವಾಗಿ ನೆರವೇರಿಸಲು ಉಸ್ತುವಾರಿಗೆಗಾಗಿ ಗೌಡಿಕೆ ಮನೆತನದ ಸದ್ಬಕ್ತರನ್ನು ಪಂಗಡವಾರು ಗೌಡರನ್ನಾಗಿ ಆರಿಸಿ ಶ್ರೀರಾಯರ ನಿತ್ಯ ಸೇವಾಭಾಗ್ಯಕ್ಕೆ ಅವಕಾಶ ಮಾಡಿಕೊಟ್ಟರು. ಅಲ್ಲಿಂದ ಈ ಲಾಗಾಯ್ತು ಎತ್ತಿನ ಮನೆ ವಂಶಸ್ಥರಾದ ಚಿಕ್ಕೇಗೌಡರು, ಪುಟ್ಟೇಗೌಡರು ಹಾಗೂ ಶೇಖರೇಗೌಡರು ಇತ್ಯಾದಿ ಪ್ರಮುಖರು ಶ್ರೀ. ಮಾರುತಿರಾಯರ ವಹಿವಾಡುದಾರರಾಗಿ ಎಲ್ಲಾ ಪಂಗಡದ ಗೌಡರ ಸಹಕಾರದಿಂದಲೂ ಪುರದ ಸದ್ಬಕ್ತರ ನೆರವಿನಿಂದಲೂ ಶ್ರದ್ಧಾ, ಭಯಭಕಿಗಳಿಂದ ಶ್ರೀ. ಮಾರುತಿರಾಯರ ಸೇವೆ ಮಾಡುತ್ತಾ, ಶ್ರೀ. ಮಾರುತಿರಾಯರ ಕೃಪೆಗೆ ಪಾತ್ರರಾಗಿದ್ದಾರೆ.
ಶ್ರೀ.ಮಾರುತಿರಾಯರ ದೇವಸ್ಥಾನ ಕಟ್ಟಿಸಿದ ಸದ್ಭಕ್ತ ಬ್ರಾಹ್ಮಣ ಮನೆತನದವರಾದ ಶ್ರೀ. ರಾಮಣ್ಣನವರ ಮನೆಯವರಿಂದಲೂ ಸೇರಿ ಈ ದೇವಾಲಯದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಮನೆತನದವರು ಕೂಡಿ ವರ್ಷಕ್ಕೊಂದಾವರ್ತಿ ಶ್ರೀ ರಆಮ ನವಮಿಯ ನಂತರದ ಒಂದು ಶುಭ ದಿನದಲ್ಲಿ ಶ್ರೀ.ಸೀತಾರಾಮಾಂಜನೇಯ ರಥೋತ್ಸವವ ಸದ್ಭಕ್ತರ ಸಮ್ಮಿಲನದ ಸಹಕಾರದಿಂದ ನೆರವೇರುತ್ತಾ ಬಂದಿದೆ. ಈ ರಥೋತ್ಸವದ ಶುಭ ಮುಹೂರ್ತಕ್ಕೆ ಆಗಮಿಕರ ಆಗಮನವು ಸಹ ಶೋಭೆ ತರುತ್ತದೆ. ಈ ಸುಕ್ಷೇತ್ರದಲ್ಲಿ ನೆಲೆಸಿರುವ ಶ್ರೀ.ಮಾರುತಿರಾಯರ ದೇವಾಲಯಕ್ಕೆ ಸಕಲ ಸದ್ಭಕ್ತರ ಕಾಣಿಕೆ ಕೊಡುಗೆಗಳ ಮಹಾಪೂರವೇ ಹರಿಯುತ್ತಾ ಬರುತ್ತದೆ. ಇದರ ಫಲವಾಗಿ ದೇವಾಲಯದ ಎದುರಿಗೆ ಗರುಡಗಂಭ ಬಲಭಾಗದಲ್ಲಿ ನವಗ್ರಹಗಳ ಗುಡಿ ಪಕ್ಕದಲ್ಲಿ ತಿರುಮಲಾದೇವರ ಗುಡಿ, ಹಿಂಭಾಗದಲ್ಲಿ ಛತ್ರದ ಕೊಠಡಿಗಳು, ಎಡಭಾಗದಲ್ಲಿ ಈಶ್ವರಗುಡಿ ತುಸು ದೂರದ ಎದುರಿಗೆ ಗಾಧಿ ಗುಡಿ, ಶ್ರೀ.ವಿನಾಯಕ ಗುಡಿ, ಊರ ಮಧ್ಯದಲ್ಲಿ ಶ್ರೀ.ಕೇಶವನ ಗುಡಿ, ಶ್ರೀ.ಬೀರಪ್ಪದೇವರ ಗುಡಿ, ಮರುಳಸಿದ್ದದೇವರ ಗುಡಿ, ಕೊತ್ತಲದಮ್ಮದೇವರ ಗುಡಿ, ಮಳೆಮಲ್ಲಪ್ಪ, ಬಾಣದೇವರು, ಕಂಬಗಲ್ಲು, ಮುದ್ರಿಕೆಕಲ್ಲು, ಶಾಸನಕಲ್ಲು, ಫಿರಂಗಿಗುಂಡು, ಮಹಾನವಮಿಬಯಲು ಇನ್ನೂ ಹತ್ತು ಹಲವಾರು ಗುಡಿಗೋಪುರಗಳು ಕಂಗೊಳಿಸುತ್ತಾ ಈ ಸುಕ್ಷೇತ್ರಕ್ಕೆ ಶೋಭೆ ತಂದಿವೆ. ಈ ಪುರ ಭಕ್ತರ ಸೇವೆಗೆ ಅನುವು ಮಾಡಿಕೊಟ್ಟಿವೆ. ಸರ್ವ ಸದ್ಭಕ್ತರಿಂದ ಮಾಡಿಸಲ್ಪಟ್ಟ ಸಿರಿ ಸುಂದರ ಬಂಗಾರದ ಚೆಲುವ ಉತ್ಸವ ಮೂರ್ತಿಯು ಭಕ್ತರ ಹೆಗಲಿನ ಮೇಲೆ ಅಡ್ಡಣಿಕೆಯಲ್ಲಿ ರಾರಾಜಿಸುತ್ತಾ ಪುರಬೀದಿಯಲ್ಲಿ ಹಲವಾರು ಮೆರವಣಿಗೆ ಉತ್ಸವಗಳಲ್ಲಿ ಕಂಗೊಳಿಸುತ್ತಾ ಮಾಟಕಾಟ ಪೀಡೆಯಾದಿ ಅನಿಷ್ಟಗಳಿಂದ ಬಳಲುವ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸುತ್ತಾ ಶ್ರೀ.ಕೆಂಚಪ್ಪದೇವರೆಂಬ ಬಿಡದೇ ಅಡ್ಡಣಿಕೆಯ ಮೇಲೆ ಓಲಾಡುತ್ತಾ ತಮಟೆ ತಾಳ, ವಾದ್ಯದ ದನಿಯಲ್ಲಿ ಕುಣಿಕುಣಿದಾಡುತ್ತಾ ಎಂತಹ ಮಾಟ ಕಾಟಗಳನ್ನು ಬಿಡದೇ ತೊಲಗಿಸುತ್ತಾ ವಿಜೃಂಬಣೆಯಿಂದ ರಾರಾಜಿಸುತ್ತದೆ. ಶ್ರೀ.ಮಾರುತಿರಾಯರು ಪುರದ ಸದ್ಭಕ್ತರೊಂದಿಗೆ ಸಕಲ ವಾದ್ಯ ಸಮೇತ ತನ್ನ ಭಂಟರ ಸಹಿತ ಆಗಾಗ್ಗೆ ಕಲ್ಹತ್ತಿಗಿರಿ, ಕೊಂತ್ಯಮ್ಮನಹೊಳೆ, ಗಂಗಮ್ಮನಹೊಳೆಗೆ ಹೋಗಿ ಪುಣ್ಯಸ್ನಾನಗೊಂಡು ವರ್ಷಕ್ಕೊಮ್ಮೆ ವಾರ್ಷಿಕ ರಥೋತ್ಸವದಲ್ಲಿ ಕಂಗೊಳಿಸುತ್ತಾ ನಂಬಿದ ಭಕ್ತಿರಗೆ ಸಕಲ ಸೌಭಾಗ್ಯವ ನೀಡುತ್ತಾ ಈ ಪುರದ ಸಿರಿದೈವವಾಗಿ ಸುತ್ತಮುತ್ತಲಿನ ಹತ್ತಳ್ಳಿ ಆರಾಧ್ಯ ದೈವವಾಗಿ ನೆಲೆಸಿರುವ ಶ್ರೀ.ರಾಯರೇ ಈ ನಿಡಘಟ್ಟ ಸುಕ್ಷೇತ್ರದೊಡೆಯ ಶ್ರೀ.ಮಾರುತಿರಾಯರು.
ಸದ್ಭಕ್ತ ಪೋಷಕ, ಭಕ್ತಬಾಂಧವ ಈ ಪುರದ ಸಿರಿಯೊಡೆಯ ಶ್ರೀ.ಮಾರುತಿರಾಯರು ಆ ಚಂದಾರ್ಕಪರಿಯಂತ ಚಿರಂಜೀವಯಾಗಿ ಸ್ಥರಿವಾಗಿ ಈ ಪುರದಲ್ಲಿ ನೆಲೆಸಿ ಸದ್ಭಕ್ತರಿಗೆ ಸಕಲ ಸೌಭಾಗ್ಯಗಳನ್ನು ಕೊಟ್ಟು ಸನ್ಮಂಗಳವನ್ನುಂಟುಮಾಡಿ ಕಾಪಾಡಲೆಂದು ಪ್ರಾರ್ಥಿಸಿ ಶ್ರೀರಾಯರ ಪಾದ ಪದ್ಮಂಗಳಿಗೆ ಶಿರಬಾಗಿ ನಮಿಸಿ ಸರ್ವರಿಗೂ ಒಳಿತನ್ನು ಬೇಡಿ ಭಕ್ತರಿಗೆ ಶುಭಕೋರಿ “ನನಗೆ ಜನ್ಮಕೊಟ್ಟ ಊರು” ಈ ನಿಡಘಟ್ಟವೆಂಬ ಶ್ರೀಮಾರುತಿರಾಯರ ಸುಕ್ಷೇತ್ರದ ಕಿರು ಪರಿಚಯವನ್ನು ಸಕಲ ಸದ್ಭಕ್ತ ವೃಂದಕ್ಕೆ ಸಮರ್ಪಿಸುತ್ತೇನೆ.
ವಿ.ಸೂ.: ನಿಡಘಟ್ಟ ಸುಕ್ಷೇತ್ರ ಹಾಗೂ ಶ್ರೀರಾಯರ ದರ್ಶನಕ್ಕೆ ವರುಣಾ ಮೂವೀಸ್, ಚಿಕ್ಕಮಗಳೂರು ಇವರ “ಏಟು ಎದಿರೇಟು” ಚಲನಚಿತ್ರ ವೀಕ್ಷಿಸಿ